ಭದ್ರಗಿರಿ ಅಚ್ಯುತದಾಸರು - 
ಉಡುಪಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಸುವರ್ಣ ಮತ್ತು ಎಣ್ಣೆ ಹೊಳೆಯ ಸಂಗಮದ ದಡದಲ್ಲಿನ ರಮ್ಯತಾಣದಲ್ಲಿರುವ ಶ್ರೀಕ್ಷೇತ್ರ ಭದ್ರಗಿರಿ ಹೆಸರು ಸಾಗರದಾಚೆಯೂ ಪ್ರಸಿದ್ಧ. ಇದಕ್ಕೆ ಕಾರಣ ಕೀರ್ತನ ಕ್ಷೇತ್ರದಲ್ಲಿ ಖ್ಯಾತನಾಮರಾದ ಭದ್ರಗಿರಿ ಸೋದರರು-ಸಂತ ಅಚ್ಯುತದಾಸರು ಮತ್ತು ಸಂತ ಭದ್ರಗಿರಿ ಕೇಶವ ದಾಸರು.

ಭದ್ರಗಿರಿಯ ಮಧ್ಯಮ ವರ್ಗದ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದ ವೆಂಕಟರಮಣ ಪೈ ಮತ್ತು ರುಕ್ಮಿಣಿಬಾಯಿ ದಂಪತಿಗಳ ಎರಡನೆಯ ಸಂತಾನ ಅಚ್ಯುತ ಪೈ (ಜನನ 1932). ಐವರು ಗಂಡುಮಕ್ಕಳಲ್ಲಿ ಎರಡನೆಯವರು. ಮೂರನೆಯವರು ಸಂತ ಕೇಶವದಾಸರು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೆಂದು ಕುಟುಂಬ ಉಡುಪಿಗೆ ಸ್ಥಳಾಂತರಗೊಂಡಿತು. ಬಡಗುತಿಟ್ಟಿನ ಯಕ್ಷಗಾನ ಕಲೆಯ ತವರೂರಾದ ಬ್ರಹ್ಮಾವರಕ್ಕೆ ಸಮೀಪವಾದ ಭದ್ರಗಿರಿ ಕಲ್ಯಾಣಪುರಗಳು ಯಕ್ಷಗಾನ, ಸಂಗೀತ, ಸಾಹಿತ್ಯಗಳ ತವರೂರು. ಇಲ್ಲಿ ಪ್ರವಚನಗಳು ನಡೆಯದ ದಿನವಿಲ್ಲ. ಇಂತಹ ಸಾಂಸ್ಕøತಿಕ ಪರಿಸರದಲ್ಲಿ ಬೆಳೆದವರು ಅಚ್ಯುತ ಪೈ ಮತ್ತು ಕೇಶವ ಪೈ. ಇದಕ್ಕೆ ಪೂರಕವಾದದ್ದು, ಮನೆಯಲ್ಲಿನ ಸುಸಂಸ್ಕøತ ವಾತಾವರಣ. ತಾಯಿ ರುಕ್ಮಿಣಿಯಮ್ಮ ಸಂಜೆಯವೇಳೆ, ಮಕ್ಕಳನ್ನೆಲ್ಲ ಕೂರಿಸಿಕೊಂಡು ಸಾಧುಸಂತರ ಕಥೆ ಹೇಳುತ್ತಿದ್ದರು. ತಾಯಿಯು ಹಾಡುತ್ತಿದ್ದ ದಾಸರ ಕೀರ್ತನೆಗಳು, ಅಭಂಗಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದ ಮಕ್ಕಳು ತಾಯಿಯೊಂದಿಗೆ ದನಿಗೂಡಿಸುತ್ತಿದ್ದರು. ಬಾಲ್ಯದ ಈ ಸಂಸ್ಕಾರ, ಅವರ ಭಾವಿ ಧಾರ್ಮಿಕ ಜೀವನಕ್ಕೆ ಭದ್ರ ಬುನಾದಿ ಹಾಕಿತು. ಯಕ್ಷಗಾನ, ಭಾಗವತಿಕೆ, ಕೀರ್ತನ ಶ್ರವಣ, ಭಜನೆಗಳಲ್ಲಿ ಭಾಗವಹಿಸುವಿಕೆ ಇವು ಈ ಬಾಲಕರಲ್ಲಿದ್ದ ಸುಪ್ತ ಕಲಾಶ್ರೀಮಂತಿಕೆಯನ್ನು ಜಾಗೃತಗೊಳಿಸುವ ಸಾಧನಗಳಾದವು.

ಅಣ್ಣ ನರಸಿಂಹ ಪೈ ಸಂಗೀತ ಕಲಿಯುವಾಗ, ಅಚ್ಯುತ ಪೈ ಮತ್ತು ಕೇಶವ ಪೈ ಅಲ್ಲಿಯೇ ಕುಳಿತು ಶ್ರದ್ಧೆಯಿಂದ ಕೇಳುತ್ತಿದ್ದರು. ಹಾಗೆ ಕೇಳಿದ್ದನ್ನು ಅಭ್ಯಾಸ ಮಾಡುವ ಮೂಲಕ ಸಂಗೀತದಲ್ಲಿ ಸಾಕಷ್ಟು ಪ್ರಭುತ್ವ ಪಡೆದರು. ಅಚ್ಯುತ ಪೈಗಳ ವಿದ್ಯಾಭ್ಯಾಸ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಯಿತು. ಆದರೆ, ಸ್ವಾಧ್ಯಾಯದಿಂದ ತಮ್ಮ ಧಾರ್ಮಿಕ ಪಾರಮಾರ್ಥಿಕ ಜ್ಞಾನವನ್ನು ಬೆಳೆಸಿಕೊಂಡರು. ಸಂಗೀತ ಶಾಸ್ತ್ರಗ್ರಂಥಗಳನ್ನು ಓದಿ, ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡರು. ಕೇಶವ ಪೈ ಕೀರ್ತನ ಕಲೆಯಲ್ಲಿ ಮುಂದುವರೆದರು. ಕೀರ್ತನೆ ಮಾಡಿ ಹಣಗಳಿಸಿ ಲೌಕಿಕ ವಿದ್ಯಾಭ್ಯಾಸದಲ್ಲೂ ಮುಂದುವರೆದರು. ಕಾನೂನು ಪಧವೀಧರರಾದರು. ಕೀರ್ತನಕಾರರಾಗಿ 38 ಬಾರಿ ವಿಶ್ವ ಪರ್ಯಟನೆ ಮಾಡಿದರು, ಕೀರ್ತನ ಕಲೆಯನ್ನು ಲೋಕ ವಿಖ್ಯಾತ ಮಾಡಿದರು.

ತಾಳಮದ್ದಲೆಯಲ್ಲಿ ಸಾಕಷ್ಟು ಪರಿಶ್ರಮ ಪಡೆದಿದ್ದು ಜನರ ಗಮನ ಸೆಳೆದಿದ್ದ ಅಚ್ಯುತ ಪೈ. ಹರಿಕಥಾ ಕ್ಷೇತ್ರಕ್ಕೆ ಪ್ರವೇಶಿಸಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. 1951ರ ಮಹಾಶಿವರಾತ್ರಿಯ ದಿನ ಪ್ರಸಿದ್ಧ ಕೀರ್ತನಕಾರರಿಂದ ಭದ್ರಗಿರಿಯ ಕಾಮೇಶ್ವರನ ಸನ್ನಿಧಿಯಲ್ಲಿ ಶಿವಕಥೆ ಏರ್ಪಾಡಾಗಿತ್ತು. ಕತೆ ಆರಂಭವಾಗಬೇಕಾಗಿದ್ದ ನಿಗದಿತ ಸಮಯ ಕಳೆದರೂ, ವಿದ್ವಾಂಸರ ಸುಳಿವಿಲ್ಲ. ಸಂಚಾಲಕರಿಗೆ ದಿಕ್ಕು ತೋಚದಂತಾಯಿತು ಕೆಲವರ ಕಣ್ಣು ಅಚ್ಯುತ ಪೈ ಮೇಲೆ ಬಿತ್ತು. ಯಕ್ಷಗಾನ ತಾಳಮದ್ದಲೆ ಕಲೆಯಲ್ಲಿ ನಿಷ್ಣಾತರಾಗಿದ್ದ. ಅವರನ್ನು ಒಲಿಸಿ, ವೇದಿಕೆಗೆ ಕರೆತಂದರು. ಅಚ್ಯುತ ಪೈ ಹರಿಕತೆ, ಶಿವಕತೆ ಕೇಳಿದ್ದರೆ ಹೊರತು, ಎಂದೂ ದಾಸರಂತೆ ಪ್ರವಚನ ಮಾಡಿದವರಲ್ಲ 18ರ ಬಿಸಿ ರಕ್ತದ ಯುವಕ, ಯಾವ ಪೂರ್ವಸಿದ್ಧತೆ ಇಲ್ಲದೆ ಶಿವಕಥೆ ನಡೆಸಿಯೇ ಬಿಟ್ಟ. ಯುವಕನ ಗಾಯನ, ಮಧುರ ಕಂಠಕ್ಕೆ, ಸ್ವರಮಾಧುರ್ಯಕ್ಕೆ, ಕಥಾ ನಿರೂಪಣಾ ಚಾತುರ್ಯಕ್ಕೆ ಶ್ರೋತೃಗಳು ಮುಗ್ಧರಾದರು. ಹೀಗೆ ಆಕಸ್ಮಿಕವಾಗಿ ಕೀರ್ತನಕ್ಷೇತ್ರಕ್ಕೆ ಯಾವ ಸಿದ್ಧತೆ ಇಲ್ಲದೆ ಪದಾರ್ಪಣೆ ಮಾಡಿದ ಅಚ್ಯುತ ಪೈ ಹಿಂತಿರುಗಿ ನೋಡಲಿಲ್ಲ. ಅತಿ ಶೀಘ್ರವಾಗಿ ಕೀರ್ತನ ಕ್ಷೇತ್ರದ ಅನಭಿಷಿಕ್ತ ಸಾಮ್ರಾಟರಾದರು. ಕೀರ್ತನ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಎರಡು ವರ್ಷಗಳ ನಂತರ, ಕಾಶೀಮಠದ ಶ್ರೀಗಳು ದಾಸದೀಕ್ಷೆ ನೀಡಿ, ಅಚ್ಯುತದಾಸರೆಂದು ಕರೆದರು ಹಾಗೂ ಮೂಲನಾರಾಯಣನೆಂಬ ಅಂಕಿತ ಪ್ರದಾನ ಮಾಡಿದರು. ಅಚ್ಯುತ ಪೈ ಸಂತ ಭದ್ರಗಿರಿ ಅಚ್ಯುತದಾಸರಾಗಿ, ಮತ್ತು ಅವರ ತಮ್ಮ ಕೇಶವ ಪೈ, ಸಂತ ಭದ್ರಗಿರಿ ಕೇಶವದಾಸರಾಗಿ ಖ್ಯಾತನಾಮರಾದರು ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಸೋದರರೆಲ್ಲಾ ಬೆಂಗಳೂರಿಗೆ ವಲಸೆ ಬಂದರು.

	ಅಚ್ಯುತದಾಸರ ಭಾರತಾದ್ಯಂತ ಪ್ರವಾಸ ಮಾಡಿದರು. ಕನ್ನಡದಷ್ಟೇ ಪ್ರಭಾವಶಾಲಿಯಾಗಿ ಸುಲಲಿತವಾಗಿ ಕೊಂಕಣಿ, ಹಿಂದಿ, ಸಂಸ್ಕøತ, ಮರಾಠಿ ಭಾಷೆಗಳಲ್ಲಿ ಕಥಾ-ಕಾಲಕ್ಷೇಪ ನಡೆಸುವುದರಲ್ಲಿ ಪರಿಣಿತಿ ಪಡೆದಿದ್ದರು. ಇದರಿಂದಾಗಿ ಅವರಿಗೆ, ಭಾರತಾದ್ಯಂತ ಆಮಂತ್ರಣಗಳು ಬರುತ್ತಿದ್ದವು. ಅಚ್ಯುತ ದಾಸರ ಪ್ರತಿಭೆ ಕೀರ್ತನಕ್ಕೆ ಮಾತ್ರ ನಿರ್ಮಿತವಲ್ಲ. ಹಲವಾರು ಮೌಲಿಕವಾದ ಕೃತಿಗಳ ರಚನೆಯನ್ನೂ ಮಾಡಿದ್ದಾರೆ. ಗೀತಾರ್ಥ ಚಿಂತನೆ-ಭಗವದ್ಗೀತೆಯ ಸಾರ ಸಂಗ್ರಹ, ಹರಿಕಥಾ ಪೂರ್ವರಂಗ ಸಂತಗಾಥ, ಹರಿಕಥಾಮೃತ ಸಿಂಧು, ಇವು ಅಚ್ಯುತ ದಾಸರ ಕೃತಿಗಳು. ಹರಿಕಥಾಮೃತ ಸಿಂಧು, ಆರು ಸಂಪುಟಗಳ ಬೃಹದ್ಗ್ರಂಥ. ಕೀರ್ತನಕಾರರ ಪಾಲಿಗೆ ಇದೊಂದು ವಿಶ್ವಕೋಶ. ಶ್ರೀ ಗುರು ಚರಿತಾಮೃತಮ್ ಕೊಂಕಣಿ ಭಾಷಾಕೃತಿ ಅಚ್ಯುತದಾಸರ ಕೀರ್ತನೆಗಳ, ಯಕ್ಷಗಾನಗಳ ಧ್ವನಿ ಸುರಳಿಗಳು ಹಾಗೂ ವಿಡಿಯೋ ಕ್ಯಾಸೆಟ್‍ಗಳೂ ಬಿಡುಗಡೆಗೊಂಡಿವೆ.

	ಅಚ್ಯುತದಾಸರು, ತಮ್ಮ ಕೇಶವದಾಸರು ಸ್ಥಾಪಿಸಿದ ಅಂತರರಾಷ್ಟ್ರೀಯ ದಾಸಾಶ್ರಮ ಕೇಂದ್ರದ ಗೌರವಾಧ್ಯಕ್ಷರಾಗಿ, ಕೀರ್ತನಕಾರರಿಗೆ ತರಬೇತಿ ನೀಡುವ ಸಲುವಾಗಿ ದಾಸಾಶ್ರಮದಲ್ಲೇ ಕೀರ್ತನ ಮಹಾವಿದ್ಯಾಲಯ ಆರಂಭಿಸಿ (ಕ್ರಿ.ಶ.2000) ಅದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಖಿಲ ಕರ್ನಾಟಕ ಕೀರ್ತನ ಕಲಾವಿದರ ಸಮ್ಮೇಳನವನ್ನು 1964ರಲ್ಲಿ ವ್ಯವಸ್ಥೆ ಮಾಡಿದ್ದರು. ಕೀರ್ತನ ಕಲಾಪರಿಷತ್ತು, ಅಚ್ಯುತ ದಾಸರು ರೂಪಿಸಿದ ಸಂಘಟನೆ. 

	ಅಚ್ಯುತದಾಸರು ಕರ್ನಾಟಕದ ಎಲ್ಲ ಗುರು ಮಠಗಳಿಂದ ಸನ್ಮಾನಿತರಾಗಿದ್ದಾರೆ. ಖಾಸಗಿ ಸಂಘ ಸಂಸ್ಥೆಗಳಿಂದ, ನಡೆದ ಸನ್ಮಾನ, ನೀಡಿದ ಗೌರವ ಪ್ರಶಸ್ತಿಗಳು ಅಸಂಖ್ಯ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕದ ಶ್ರೇಷ್ಠ ಪ್ರಶಸ್ತಿಯಾದ ಶ್ರೀ ಕನಕ ಪುರಂದರ ಪ್ರಶಸ್ತಿ ಯ ಗೌರವವೂ ಕ್ರಿ.ಶ.2000ದಲ್ಲಿ ಇವರಿಗೆ ಸಂದಿದೆ.						
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ